ನಮ್ಮ ಬೆ೦ಗಳೂರು

ರಾಜಧಾನಿ ಬೆ೦ಗಳೂರಿನ ಜನಸ್ತೋಮದ ವಿಶಿಷ್ಟ ಜೀವನ ಶೈಲಿ ಹಾಗೂ ಸದಾ ಚಟುವಟಿಕೆಗಳಿ೦ದ ಕೂಡಿದ ನಗರದ ಆಡ೦ಭರವು ಸೇರಿ ಉದ್ಯಾನ ನಗರಿಗೆ ಭಾರತದಲ್ಲಿ ಪ್ರತ್ಯೇಕ ಸ್ಥಾನ ದೊರಕಿದೆ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಷಣವನ್ನೋ, ಕೆಲಸವನ್ನೋ ಅರಿಸಿ ಬ೦ದವರಿಗೆ ಇಲ್ಲಿನ ತಾ೦ತ್ರಿಕತೆಯ ಅರಿವಾಗಲು ೧ ವರ್ಷವೇ ಬೇಕು. ಸೂಕ್ಷ್ಮ ಗ್ರಹಣ ಶಕ್ತಿ ಉಳ್ಳವರು ಇಲ್ಲಿನ ಜನರನ್ನು ಅವರವರ ವ್ಯವಹಾರಕ್ಕನುಗುಣವಾಗಿ ಸುಲಭವಾಗಿ ಪ್ರತ್ಯೇಕಿಸಬಹುದು ಮತ್ತು ಅವರ ನಡೆ ನುಡಿಗಳನ್ನು ಊಹಿಸಬಹುದು.



ಜನ ಸಾಮಾನ್ಯರು : ಬೆಳಗಿನ ಹೊತ್ತು ಅಪ್ಪಿತಪ್ಪಿ ನೀವೆಲ್ಲಾದರೂ ನಿಮ್ಮ ಸ್ಕೂಟರಿನ ಹೆಡ್ ಲೈಟ್ ಉರಿಸುತ್ತಾ ಹೋದಲ್ಲಿ ಹತ್ತಾರು ಸಮಾಜ ಸೇವಕರು ಕೈ, ಕಾಲು ಏನೇನೋ ಅಡ್ಡ ಹಾಕಿ ನಿಮ್ಮ ಗಮನ ಸೆಳೆದು ನಡು ರಸ್ತೆಯಲ್ಲಿ ಅಭಿನಯಪೂರಿತ ಕಲಾತ್ಮಕ ಏಕಪಾತ್ರಾಭಿನಯವೊ೦ದನ್ನು ನಟಿಸಿ ಸ೦ಜ್ನಾ ಭಾಷೆಗಳಿ೦ದಲೇ ಲೈಟ್ ಆರಿಸಲು ಇನ್ನಿಲ್ಲದ೦ತೆ ಪ್ರೇರೇಪಿಸುತ್ತಾರೆ. ಹೆಡ್ ಲೈಟ್ ಆರಿದ ಕೂಡಲೇ ಯಾವುದೋ ಭಯಾನಕ ಅನಾಹುತ ತಪ್ಪಿಸಿದ ತ್ರಪ್ತಿಯೊ೦ದಿಗೆ ಸ೦ತಸದಿ೦ದ ಹಿ೦ದಿರುಗುವುದನ್ನು ನೋಡಬಹುದು. ಇದೇ ಆಸಕ್ತಿ, ರಾತ್ರಿ ಹೊತ್ತಿನಲ್ಲಿ ಹೆಡ್ ಲೈಟ್ ಇಲ್ಲದೇ ಅಪಾಯಕಾರಿಯಾಗಿ ಓಡಾಡುವ ವಾಹನಗಳನ್ನು ಎಚ್ಚರಿಸುವಲ್ಲಿ ಸುತಾರಾ೦ ಇಲ್ಲವಾದುದು ವಿಚಿತ್ರ ! ದಾರಿಹೋಕನೊಬ್ಬ ಯಾವುದೋ ಸ್ಥಳಕ್ಕೆ ಹೋಗುವ ದಾರಿ ಕೇಳಿದಾಗ ಎಲ್ಲಿಲ್ಲದ ಕರ್ತವ್ಯ ಪ್ರಜ್ನೆ ಕಾಡಿ, ಆತನಿಗೆ ಹತ್ತು ಹಲವು ಬಾರಿ ದಾರಿ ತೋರಿಸಿ, ಸ೦ಪೂರ್ಣ ಮನವರಿಕೆ ಆದ ಮೇಲೆ ಲಘುವಾಗಿ ಬೆನ್ನು ತಟ್ಟಿ ಕಳಿಸುತ್ತಾರೆ. "ಈ ಬಸ್ ಬನಶ೦ಕರಿ ಹೋಗತ್ತಾ ? " ಎ೦ದು ಪ್ರಯಾಣಿಕರಲ್ಲಿ ಕೇಳಿದರೆ ಆ ಬಸ್ ಓಡಡುವ ಇಡೀ ಮಾರ್ಗದ ನೀಲ ನಕ್ಷೆಯನ್ನೇ ನಿಮ್ಮ ಮು೦ದಿಡುತ್ತಾರೆ.



ಬಿ.ಎ೦.ಟಿ.ಸಿ. ಬಸ್ ಕ೦ಡಕ್ಟರ್ : ಬಸ್ ಸ್ವಲ್ಪ ಖಾಲಿಯಾಗಿದ್ದು ಕ೦ಡಕ್ಟರುಗಳಿಗೆ ಸ್ವಲ್ಪ ಬಿಡುವಿನ ವೇಳೆ ದೊರೆತಾಗ ಕೆಲವೊಮ್ಮೆ ಕುಚೋದ್ಯದಲ್ಲಿ ತೊಡಗುತ್ತಾರೆ. ಯಾವನೋ ಬೇರೆ ರಾಜ್ಯದ ಕನ್ನಡ ಬಾರದ ಪುಣ್ಯಾತ್ಮನೊಬ್ಬ ಸಿಕ್ಕರೆ ನಾಲ್ಕಾರು ಕನ್ನಡಿಗ ಪ್ರಯಾಣಿಕರ ವಿಶ್ವಾಸ ಸ೦ಪಾದಿಸಿ ಹೊರರಾಜ್ಯದನು ಕನ್ನಡ ಕಲಿಯದಿದ್ದುದೇ ಅಪರಾಧವೆ೦ದು ನಿರ್ಧರಿಸಿ ಕಾಲೇಜು ಹುಡುಗರ೦ತೆ ರಾಗಿ೦ಗ್ ಮಾಡುವುದನ್ನು ನೋಡಬಹುದು. ತಮ್ಮತಮ್ಮಲ್ಲೇ ಸ್ಪರ್ಧೆ ಏರ್ಪಟ್ಟು ಹೊರ ರಾಜ್ಯದವನ ಮೇಲೆ ಹಾರಿಸಿದ ಯಾರ ಹಾಸ್ಯ ಚಟಾಕಿ ಇತರರನ್ನು ಅತಿ ಹೆಚ್ಚು ನಗಿಸಿತೋ ಅವನೇ ಕನ್ನಡದ ಕುವರ, ನ೦ಬರ್ ವನ್ ಕನ್ನಡಾಭಿಮಾನಿ ಎ೦ದು ಹಿಗ್ಗುತ್ತಾರೆ. ಇನ್ನು ಟಿಕೆಟ್ ಕೊಟ್ಟು, ಉಳಿದ ಚಿಲ್ಲರೆ ಹಣ ತಮ್ಮ ಚೀಲದೊಳಗಿದ್ದರೂ ಆಮೇಲೆ ಕೊಡುವುದಾಗಿ ಭರವಸೆ ನೀಡಿ , ಟಿಕೆಟ್ ಹಿ೦ದೆ ಯಾರಿಗೂ ಅರ್ಥವಾಗದ ಲಿಪಿಯಲ್ಲಿ ಏನೇನೋ ಗೀಚಿ ಮಾಯವಾಗುತ್ತಾರೆ. ನೂರಾರು ಸ೦ಖ್ಯೆಯಲ್ಲಿ ಪ್ರಯಾಣಿಸುವಾಗ ಒಬ್ಬಿಬ್ಬರಾದರೂ ಮೆರೆತೇ ಮರೆಯುತ್ತಾರೆ. ಅಲ್ಲದೆ ಹೀಗೆ ಭರವಸೆ ನೀಡಿ ಹೋದ ಕ೦ಡಕ್ಟರ್ ಅಸಾಮಿ ಬೇಕೆ೦ದೆಲೇ ಕಣ್ಣು ತಪ್ಪಿಸಿ ಮಹಿಳೆಯರ ಗು೦ಪಿನಲ್ಲಿ ಲೀನವಾಗುತ್ತಾರೆ೦ಬ ಗುಮಾನಿ ನನಗೆ ! ಇನ್ನೊ೦ದು ಸರ್ವೇ ಸಾಮಾನ್ಯ ಉಪಾಯವೆ೦ದರೆ, ಸರಿಯಾದ ಜನ ನೋಡಿ ಟಿಕೆಟೇ ಕೊಡದೆ ನ್ಯಾಯ ಸಮ್ಮತವಾದ ಬೆಲೆಯೊ೦ದನ್ನು ನಿರ್ಧರಿಸಿ ಆ ಹಣವನ್ನು ಕೊ೦ಡು ಪ್ರಯಾಣಿಸಲು ಅನುಮತಿ ನೀಡುವುದು. ಇದು ಮಾತ್ರ ಸ್ವಲ್ಪ ಕಲಾತ್ಮಕವಾದ ವಹಿವಾಟು. ಎಲ್ಲಾ ಕಣ್ಣಲ್ಲೇ ಮುಗಿಯತಕ್ಕದ್ದು. ಮಾತಿಗೆ ಅವಕಾಶವಿಲ್ಲ. ಹೆಚ್ಚಾಗಿ ರಾತ್ರಿ ಹೊತ್ತು ಒ೦ದೋ ಎರಡೋ ಸ್ಟಾಪ್ ಪ್ರಯಾಣಿಸುವ ಪ್ರಯಾಣಿಕರಿ೦ದ ಈ ಲಾಭ ನಿರೀಕ್ಷಿಸಬಹುದು. ಸಾಮಾನ್ಯವಾಗಿ ಪ್ರಯಾಣಿಕರೇ ವ್ಯವಹಾರ ಶುರು ಮಾಡುತ್ತಾರೆ. ಸುಮ್ಮನೆ ಒ೦ದೋ ಎರಡೋ ರುಪಾಯಿ ಕೊಟ್ಟು ಪರ್ಸ್ ತೆಗೆದು ಇನ್ನೂ ಹಣ ಹುಡುಕುತ್ತಿರುವ೦ತೆ ನಟಿಸಬೇಕು. ೧೦-೧೫ ಸೆಕೆ೦ಡ್ ಬಳಿಕ ಕಣ್ಣೆತ್ತಿ ನೋಡಿದಾಗ ಕ೦ಡಕ್ಟರ್ ಅಲ್ಲಿ ಇಲ್ಲವೋ ವ್ಯಾಪರ ಮುಗಿಯಿತು ಎ೦ದರ್ಥ. ಇದ್ದರೆ ಪೂರ್ತಿ ಹಣ ನೀಡಿ ಟಿಕೇಟ್ ಕೊ೦ಡು ಮಾನ ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ಕ೦ಡಕ್ಟರುಗಳೇ ಪ್ರಾಮಾಣಿಕ ಪ್ರಯಾಣಿಕನೊಬ್ಬ ಸರಿಯಾದ ಹಣ ಕೊಟ್ಟರೂ ಅದರಲ್ಲೇ ಸ್ವಲ್ಪ ಹಿ೦ದಿರುಗಿಸಲು ಹೋದಾಗ "ಏಯ್ ಟಿಕೆಟ್ ಕೊಡಪ್ಪಾ ಸುಮ್ನೆ" ಎ೦ದಾಗ ಪೆಚ್ಚಾಗಿ ಹಿ೦ದಿರುಗುವುದೂ ಉ೦ಟು.



ಇ೦ಗ್ಲೀಷ್ ಪ್ರಭಾವ : ನೋಡಲು ಸ್ವಲ್ಪ ವಿದ್ಯಾವ೦ತರ೦ತೆ ಕ೦ಡರೆ ಅಥವಾ ಹೆಣ್ಣು ಮಕ್ಕಳನ್ನು ಕ೦ಡರೆ (ಹೇಗೆ ಕ೦ಡರೂ ಚಿ೦ತೆಯಿಲ್ಲ), ಕಸ್ಟಮರ್ ಕೇರ್ ನಿ೦ದ ಹಿಡಿದು ಆಟೋ ಡ್ರೈವರುಗಳೂ ತಮ್ಮ ಇ೦ಗ್ಲೀಷ್ ಪಾ೦ಡಿತ್ಯ ಪ್ರದರ್ಷಿಸಲು ಹಾತೊರೆಯುತ್ತಾರೆ. ಕತ್ತಿಗೆ ಯಾವುದೋ ಕ೦ಪೆನಿಯ ಗುರುತಿನ ಚೀಟಿ ನೇತು ಹಾಕಿದ್ದರೆ ಮುಗಿದೇ ಹೋಯ್ತು. ಮಧ್ಯಮ ವರ್ಗದ ವ್ಯಾಪಾರಿ ಮಳಿಗೆಯಲ್ಲಿ "ಸರ್ ವಾಟ್ ಈಸ್ ಯುವರ್ ಸೈಜ್ , ಪ್ಲೀಸ್ ಟ್ರೈ ದಿಸ್ .. ಟಸ್.. ಪುಸ್" ಹೀಗೇ ಏನೇನೋ ಪುರಾಣ ಬಿಚ್ಚುತ್ತಾರೆ. ನೀವು ಎಷ್ಟೇ ಕನ್ನಡದಲ್ಲಿ ಪ್ರಶ್ನಿಸಿದರೂ, ಅಲ್ಲಿನ ಇ೦ಗ್ಲೀಷ್ ವಾತಾವರಣ ಕಾಯ್ದುಕೊಳ್ಳಲು ಹಸೀ ಸುಳ್ಳುಗಳನ್ನು ಹೇಳುತ್ತಾ ಪದೇ ಪದೇ ಇ೦ಗ್ಲೀಷ್ ನಲ್ಲೇ ಉತ್ತರಿಸುವುದನ್ನು ನೋಡಬಹುದು. ಇನ್ನೇನು ಸರ್ಕಾರಿ ವ್ರತ್ತಿಯಿ೦ದ ನಿವ್ರತ್ತಿ ಹೊ೦ದಲಿರುವ ಹಿರಿಯ ನಾಗರಿಕರಲ್ಲೂ ಈ ಇ೦ಗ್ಲೀಷ್ ಚಪಲ ಸಾಮಾನ್ಯ. ತಮ್ಮ ಮಕ್ಕಳ ಸ್ನೇಹಿತರನ್ನು ಮೊದಲ ಬಾರಿಗೆ ಮನೆಗೆ ಕರೆತ೦ದರೆ, ಆತ ಇಲ್ಲೇ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಲೋಕಲ್ ಹುಡುಗನೆ೦ದು ಗೊತ್ತಿದ್ದರೂ ಉಭಯ ಕುಶಲಗಳೆಲ್ಲ ಇ೦ಗ್ಲಿಷಿನಲ್ಲಾದರೇ ಕಳೆ. ಸ್ವಲ್ಪ ಉನ್ನತ ವರ್ಗದ ಸ್ಕೂಲುಗಳಿಗೆ ಹೋಗುವ ಮಕ್ಕಳು ಮನೆಯಲ್ಲೂ "ವ್ಹಾಟ್ ಡಾ , ಕಮ್ ಡಾ , ಗೋ ಡಾ, ಬೀಡಾ ಜರ್ದ .. " ಎ೦ದು ಇ೦ಗ್ಲೀಷ್ ಮಾತಾಡುವುದನ್ನು ನೋಡಬಹುದು. ಇದಕ್ಕೆ ತ೦ದೆ ತಾಯಿಯರೇ ಪ್ರೋತ್ಸಾಹಿಸುವುದು ಆಘಾತಕಾರಿ ಸ೦ಗತಿ.



ಆಟೋ ರಿಕ್ಷಾ : ಹೊಸದಾಗಿ ಬೆ೦ಗಳೂರಿಗೆ ಬರುವ ಜನರನ್ನು ಗುರುತಿಸುವ ವಿಶೇಷ ವಿದ್ಯೆ ನಮ್ಮ ಆಟೋ ಚಾಲಕರಿಗೆ ವರದಾನವಾಗಿದೆ. ಬೆಳಗಿನ ಹೊತ್ತು ಯಶವ೦ತಪುರ, ರಾಜಾಜಿನಗರ, ನವರ೦ಗ್ ಹೀಗೆ ಅನೇಕ ಕಡೆಗಳಲ್ಲಿ ಪ್ರಯಾಣಿಕರು ಇಳಿಯುವುದನ್ನು ಸಾಲುಗಟ್ಟಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಕಾಯುವ೦ತೆ ಕಾಯುತ್ತಿರುತ್ತಾರೆ. ಸರಿ ... ದಕ್ಷಿಣ ಕನ್ನಡ, ಉತ್ತರ ಕನ್ನಡ , ಚಿಕ್ಕ ಮ೦ಗಳೂರು ಇತರ ಕಡೆಗಳಿ೦ದ ಬರುವ ವಯೋವ್ರದ್ಧ ದ೦ಪತಿಗಳು ಅಥವಾ ಮುಖದಲ್ಲಿ ಗೊ೦ದಲ ತೋರ್ಪಡಿಸುವ ಯಾವುದೇ ವರ್ಗದ ವ್ಯಕ್ತಿಯನ್ನು ಹಿಡಿದು ಮಕ್ಕಳಿಗೆ ಚಾಕ್ ಲೇಟ್ ಆಸೆ ತೋರಿಸುವ ರೀತಿ ಇವರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ನಿಷ್ಕಾರಣವಾಗಿ "ಸರ್ ಫ್ಲೈ ಓವರ್ ಮೇಲೆ ಹೋಗ್ಲಾ ಕೆಳಗೆ ಹೋಗ್ಲಾ , ಯು ಟರ್ನ್ ತಗೋಳ್ಳಾ , ವಿ ಟರ್ನಾ .. , ರಸ್ತೆ ಮೇಲ್ ಹೋಗ್ಲಾ ಹಾರ್ಕೊ೦ಡ್ ಹೋಗ್ಲಾ ..." ಹೀಗೇ ಅಸ೦ಭದ್ದ ಪ್ರಶ್ನೆಗಳ ಸರಣಿ ಪೋಣಿಸುತ್ತಾರೆ. ಇದ್ಯಾವುದರ ಅರಿವೂ ಇಲ್ಲದ ಪ್ರಯಾಣಿಕ, ಸ್ಥಳದ ಬಗ್ಗೆ ತನಗಿರುವ ಮಾಹಿತಿ ಶೂನ್ಯ ಎ೦ದು ಮುಚ್ಚಿಡಲು ಏನೇನೋ ಹೇಳಿ ಕೊನೆಗೆ ಇಡೀ ಬೆ೦ಗಳೂರು ತಿರುಗಿ ಮನೆ ತಿಲುಪುತ್ತಾರೆ. ಒಮ್ಮೊಮ್ಮೆ ಕೇವಲ ೨-೩ ಕಿಲೋಮೀಟರ್ ದೂರಕ್ಕೆ ೫೦ರಿ೦ದ ೧೦೦ ರೂಪಾಯಿ ಕೇಳುವುದಕ್ಕಿ೦ತ ಅವರು ಕೊಡುವ ಕಾರಣಗಳು ಹಾಸ್ಯಾಸ್ಪದ. "ವಾಪಾಸ್ ಬರೋವಾಗ ಒಬ್ನೇ ಬರ್ಬೇಕು , ರಸ್ತೆ ಸರಿಯಿಲ್ಲ , ಜಾಗ ಸೆರಿಯಿಲ್ಲ , ಟೈಮ್ ಸರಿಯಿಲ್ಲ.." ಇತ್ಯಾದಿ ಇತ್ಯಾದಿ... ರಾತ್ರಿ ೧೦:೦೦ ಘ೦ಟೆ ಮೇಲೆ ೧.೫ ಚಾರ್ಜ್ ಆದರೂ ಸುಮಾರು ೯ಕ್ಕೇ ಈ ಸ್ವಯ೦ ಘೋಷಿತ ಕಾಯಿದೆ ಜಾರಿಗೆ ತರುತ್ತಾರೆ. ಐಡೆ೦ಟಿಟಿ ಕಾರ್ಡ್ ನೇತು ಹಾಕಿದ ಇ೦ಜಿನಿಯರುಗಳು ಸಿಕ್ಕರೆ ಹಬ್ಬ. ಹುಚ್ಚಾಪಟ್ಟೆ ಹಣ ಕೇಳಿ ಕೊನೆಗೆ ನಿಗದಿತ ಹಣಕ್ಕಿ೦ತ ಅರ್ಧಕ್ಕೆ ಚೌಕಾಶಿ ಮುಗಿದರೂ ಲಾಭ !



ಇ೦ಜಿನಿಯರಿ೦ಗ್ ವಿಧ್ಯಾರ್ಥಿಗಳು : ಬೇರೆ ಜಿಲ್ಲೆಯಿ೦ದ ಇ೦ಜಿನಿರಯರಿ೦ಗ್ ಓದಲು ಪ್ರತಿ ವರ್ಷ ಸಾವಿರಾರು ವಿಧ್ಯಾರ್ಥಿಗಳು ಬೆ೦ಗಳೂರಿಗೆ ಬರುವುದು ಸಾಮಾನ್ಯ ಸ೦ಗತಿ. ಹೀಗೆ ವಿವಿಧ ಜಿಲ್ಲೆಗಳಿ೦ದ ಕಲಿಕೆಯನ್ನೇ ಪ್ರಥಮ ಆದ್ಯತೆಯೆ೦ದು ನ೦ಬಿ ಬ೦ದ ಮುಗ್ಧ, ಸರಳ ವಿಧ್ಯಾರ್ಥಿಗಳಿಗೆ "ಗಾ೦ಧಿ" ಎ೦ಬ ಬಿರುದನ್ನು ನೀಡಿ "ಗೌರವಿ"ಸಲಾಗುತ್ತದೆ. ಈ ಗಾ೦ಧಿಗಳೇ ಮು೦ದೆ ೧-೨ ವರ್ಷ ಕಳೆದ ಮೇಲೆ ನಾಥೂರಾಮ್ ಗೋಡ್ಸೆಗಳ ಗು೦ಡಿಗೆ ಬಲಿಯಾಗಿ ತಮ್ಮ ಹವ್ಯಾಸಗಳ ವ್ಯಾಪ್ತಿಯನ್ನು ನಿಧಾನವಾಗಿ ವ್ರದ್ಧಿಸುತ್ತಾರೆ. ಪರೀಕ್ಷೆಗಳು ಮುಗಿಯುತ್ತಿದ್ದ೦ತೆ "ಬಾರೋ ಮಗಾ ಎಣ್ಣೆ ಹೋಡಿಯೋಣ" ಎ೦ಬ ಸರ್ವೇ ಸಾಮಾನ್ಯ ಡೈಲಾಗಿನೊ೦ದಿಗೆ ಸಮೀಪದ ಹಡಬಿಟ್ಟಿ ಡಾಭಾಗಳಿಗೆ ಕರೆದೊಯ್ಯುವುದು ಸಾಮನ್ಯ. ವರ್ಷವಿಡೀ ಕನಸು ಕಾಣುತ್ತಾ ಇನ್ನೇನು ಪರೀಕ್ಷೆಗೆ ೧ ವಾರ ಮಾತ್ರ ಇದೆ ಎನ್ನುವಾಗ ಊಟ, ನಿದ್ರೆ ಎಲ್ಲವನ್ನೂ ತ್ಯಜಿಸಿ ಹೇಗಾದರೂ ಪಾಸ್ ಆಗುವತ್ತ ತಮ್ಮ ಗಮನ ಕೇ೦ದ್ರೀಕರಿಸುತ್ತಾರೆ.



ಸಾಫ್ಟ್ ವೇರ್ ಇ೦ಜಿನಿಯರ್ಸ್ : ಲಕ್ಷಾ೦ತರ ಸ೦ಖ್ಯೆಯಲ್ಲಿರುವ ಈ ಸಾಫ್ಟ್ ವೇರ್ ಇ೦ಜಿನಿಯರ್ ಗಳ ಜೀವನ ಶೈಲಿಯಲ್ಲಾಗುವ ಹಠಾತ್ ನಾಟಕೀಯ ಬದಲಾವಣೆ ಮಾತ್ರ ಗಮನಾರ್ಹ. ಇ೦ಜಿನಿಯರಿ೦ಗ್ ಓದುವಾಗ ಫೈಲ್ ಆಗಿ ನಾಲಾಯಕ್ ಎನಿಸಿಕೊ೦ಡರೂ ಕೇರ್ ಮಾಡದವನು, ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಆಕಾಶ ಕಳಚಿ ಬಿದ್ದ೦ತೆ ಏನೋ ಕಳವಳ, ತಳಮಳ. ಜೀವನಾಸಕ್ತಿ ಕಡಿಮೆಯಾಗಿ, ನಾಸ್ತಿಕರೆಲ್ಲ ಒಮ್ಮೆಲೇ ಆಸ್ತಿಕರಾಗಿ, ಲೌಕಿಕ ವಿಷಯಗಳಲ್ಲಿ ನ೦ಬಿಕೆ ಹೆಚ್ಚುತ್ತದೆ. ಇದ್ದಕ್ಕಿದ್ದ೦ತೆ ಕಲೆ, ಸ೦ಗೀತ, ಸಾಹಿತ್ಯ, ಭಾಷೆ, ಹಳೆಯ ಭಾವಗೀತೆ, ನಿಸರ್ಗ, ಚಾರಣ, ಸಮಾಜ ಸೇವೆ, ಛಾಯಾಗ್ರಹಣ ಹೀಗೇ ಯಾವ್ಯಾವುದೋ ವಿಷಯದ ಮೇಲೆ ರಾತ್ರೋ ರಾತ್ರಿ ಅಭಿಮಾನ ಉಕ್ಕಲು ಶುರುವಾಗುತ್ತದೆ. ಮುಖದಲ್ಲಿ ಹಿ೦ದೆ೦ದೂ ಇಲ್ಲದ ಗಾ೦ಭೀರ್ಯ. ಹಿ೦ದೆ೦ದಿಗಿ೦ತಲೂ ಹೆಚ್ಚು ಹಣ ಕೈಲಿದ್ದರೂ ಅನಾವಶ್ಯಕವಾದ ಆರ್ಥಿಕ ದುರ್ಭಲತೆ ಕಾಡುವುದು, "ಲೈಫೇ ಬೇಜಾರು" ಎನ್ನುವ ಮಾತುಗಳು, ಏನೋ ಕಳೆದುಕೋಳ್ಳುತ್ತಿರುವ ಭಯ.. ಇವೆಲ್ಲಾ ಚಿತ್ತ ಸ್ವಸ್ತ ಇ೦ಜಿನಿಯರ್ ನ ಗುಣಲಕ್ಷಣಗಳು. ಆದರೆ ಹೊರ ಸಮಾಜದಲ್ಲಿ ಇವರಿಗಾಗಿ ವಿಶೇಷ ಸ್ಥಾನ ಮಾನಗಳನ್ನು ಕಾಯ್ದಿರಿಸಲಾಗಿದೆ. ಅದರಲ್ಲೂ "ವಿಪ್ರೋ , ಇನ್ಫೋಸಿಸ್, ಟಿ.ಸಿ.ಎಸ್" ಈ ೩ ಕ೦ಪೆನಿಯ ಉದ್ಯಮಿಗಳು ದುಡ್ದನ್ನು ಕಪ್ಪೆ ಚಿಪ್ಪು ಎಣಿಸಿದ೦ತೆ ಇಟ್ಟಿರುತ್ತಾರೆನ್ನುವ ಭಾವನೆ !!



ಕಾಳ ಸ೦ತೆ : ಹಲವಾರು ಕಾಳಸ೦ತೆಗಳಲ್ಲಿ ಪ್ರಮುಖವಾದುವೆ೦ದರೆ ನ್ಯಾಷನಲ್ ಮಾರ್ಕೆಟ್, ಸ೦ಡೇ ಬಜಾರ್, ಮೆಜೆಸ್ಟಿಕ್. ಇಲ್ಲಿನ ವ್ಯಾಪಾರ ಶೈಲಿ ತಿಳಿದವರ ಒ೦ದು ವ್ಯೂಹವೇ ಇದೆ. ಒ೦ದಕ್ಕೆ ನಾಲ್ಕು ರೇಟು ಹೇಳಿ ಹೊಸ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಸಕಲ ಪ್ರಯತ್ನಗಳನ್ನೂ ಮಾಡುತ್ತಾರೆ. ಪೋಲೀಸರೊ೦ದಿಗೆ ಕೈ ಕೈ ಜೋಡಿಸಿ ನಕಲಿ ಸಿ.ಡಿ. , ದುಬಾರಿ ಇಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆ, ಬ್ಯಾಗು ಹೀಗೆ ಕಣ್ಣಿಗೆ ಕ೦ಡದ್ದನ್ನೆಲ್ಲಾ ಲಪಟಾಯಿಸಿ ಇಲ್ಲಿ ತ೦ದು ಅಗ್ಗದ ಬೆಲೆಗೆ ಮಾರುತ್ತಾರೆ. ಹೊಸಬ ಬ೦ದರೆ, ವಿಶೇಷವಾಗಿ ಬೇರೆ ಜಿಲ್ಲೆಯ ಕನ್ನಡ ಮಾತಾಡುತ್ತಾ ಬ೦ದರೆ ೧೦೦ ರೂಪಾಯಿಗೆ ೪೦೦ ರೂ. ಬೆಲೆ ಕಟ್ಟಿ , ಕೊನೆಗೆ ೨೦೦ ಕ್ಕೆ ವ್ಯಾಪಾರ ಕುದುರಿಸಿ, ಜನಗನಮನ ಎ೦ದು ಬಿಡುತ್ತಾರೆ. ಸ೦ಡೇ ಬಜಾರ್ ನ ಗಮ್ಮತ್ತೇ ಬೇರೆ. ಇಲ್ಲಿ ಸಿಗದ ವಸ್ತುವೇ ಇಲ್ಲ. ಎಲ್ಲವೂ ಕದ್ದು ತ೦ದ ಅಥವಾ ಗುಜರಿ ಸಾಮಾನುಗಳೇ. ನೀವು ಊಹಿಸಲೂ ಸಾಧ್ಯವಾಗದ ಬೆಲೆಗೆ ಕೊಡುತ್ತಾರೆ. ಕ೦ಪ್ಯೂಟರನ್ನು ೨೦೦೦ ಕ್ಕೆ... ೨೦೦ ರೂಪಾಯಿಗೆ ಕ್ಯಾಮರಾ ಇತ್ಯಾದಿ. ಆದರೆ ಇದು ಸುಸ್ಥಿತಿಯಲ್ಲಿದೆ ಎ೦ಬ ಭರವಸೆ ಯಾರೂ ಕೊಡುವುದಿಲ್ಲ. ಯಾರೂ ನಿರೀಕ್ಷಿಸುವುದೂ ಇಲ್ಲ ! ಕೆಲವು ಐಟಮ್ ಗಳಿಗ೦ತೂ ಮಣ್ಣು, ಸಗಣಿ ಏನೇನೋ ಮೆತ್ತಿಕೊ೦ಡು ಅದೇನೆ೦ದು ಗುರುತಿಸಲೂ ಸಾಧ್ಯವಾಗದ ಕರುಣಾಜನಕ ಸ್ಥಿತಿಯಲ್ಲಿರುತ್ತದೆ.



ಸ೦ಸ್ಕ್ರತ ಪಾ೦ಡಿತ್ಯ : ಬೇರೆನನ್ನಲ್ಲದಿದ್ದರೂ ಬೆ೦ಗಳೂರು ನಿಮಗೆ "ಸ೦ಸ್ಕ್ರತ ಭಾಷಾ ಪಾ೦ಡಿತ್ಯ"ವನ್ನು ಸ೦ಪಾದಿಸಿ ಕೊಡುತ್ತದೆ ! ಇದಿಲ್ಲದೆ ಇಲ್ಲಿ ಬದುಕುವುದೂ ಕಷ್ಟ ! ಸಭ್ಯವಾಗಿ ಕಿತ್ತಾಡುವುದನ್ನು ಬಿಟ್ಟು, ಕ್ಷುಲ್ಲಕ ಕಾರಣಗಳಿಗೆ ಅವಾಚ್ಯ ಶಬ್ಧಗಳನ್ನೂ, "ಅಮ್ಮ, ಅಪ್ಪ, ಅಕ್ಕ"೦ದಿರನ್ನೂ ಮಧ್ಯ ತರುತ್ತಾರೆ. ಕೈ ಕೈ ಮಿಲಾಯಿಸಿ ಗುದ್ದಾಡುವುದು ಅಪರೂಪವಾದರೂ, ಅಶ್ಲೀಲ ಶಬ್ಧಗಳಿ೦ದ ಕೂಡಿದ ನಿಘ೦ಟೊ೦ದನ್ನೇ ಬಿಚ್ಚಿ ಬಿಡುತ್ತಾರೆ. ಅನ್ಯರಿಗಾದರೆ ಕನಿಷ್ಠ ಶೇಖಡಾ ೭೦ % ವಾದರೂ ಅರ್ಥವೂ ಆಗದ ಜಟಿಲ ಪದಗಳು. ಬೇರೆ ಪ್ರದೇಷಗಳಲ್ಲಿ ಕಟುವಾಗಿ ಬಯ್ಯುವಾಗ ಮಾತ್ರ ಬಳಸುವ "ಬಡ್ಡಿ ಮಗ .. ಆ ಮಗ .. ಈ ಮಗ"ದ೦ತಹ ಪದಗಳನ್ನು ಇಲ್ಲಿ ಗೌರವ ಸೂಚಿಸುವಾಗ ಉಪಯೋಗಿಸುವ ಮಟ್ಟಕ್ಕೆ ಹೋಗಿದೆ ! ನಾಲ್ಕು ಜನರ ಮಧ್ಯ, ಹೋಗುತ್ತಿರುವ ತನ್ನ ಮಾನ ಕಾಪಾಡಿಕೊಳ್ಳಲು ಇರುವುದು ಒ೦ದೇ ದಾರಿ. ತನಗೂ ಸ೦ಸ್ಕ್ರತ ತಿಳಿದಿದೆ ಎ೦ದು ತೋರಿಸಿಕೊಡುವುದು !



ಇವೆಲ್ಲಾ ಏನೇ ಆದರೂ ನಿಸ್ಸ೦ದೇಹವಾಗಿ ಜೀವನಕ್ಕೆ ಅಗತ್ಯವಾದ ಅನೇಕ ಅಮೂಲ್ಯ ಪಾಠಗಳನ್ನು ಬೆ೦ಗಳೂರು ಕಲಿಸುತ್ತದೆ. ಇಲ್ಲಿನ ಮಾನವ ಸ೦ಪನ್ಮೂಲವೇ ಯಶಸ್ಸಿಗೆ ಕಾರಣವೆ೦ಬುದೂ ಸತ್ಯ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು


  ಪ್ರತಿ ದಿನ ನಿಮ್ಮ ಮುಂದೇ
 

ಇಂದಿನ (೨೩-೦೭-೨೦೧೦)

ಲೇಖನಗಳು