ಈ ಹಿಂದೆ ನಾನು "ನಿಮಗೆ ಕನ್ನಡ ಬರುತ್ತಾ?" ಎಂಬ ಲೇಖನ ಬರೆದಿದ್ದಾಗ ಹಲವಾರು ಸಂಪದಿಗರು ತಮ್ಮ ತಾಯಿ ಭಾಷೆ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಆಗ ನನ್ನ ಹಾಗೂ "ಅಪ್ಪಟ ಕನ್ನಡಾಭಿಮಾನಿ" ಎಂದು ಸಂಪದ ಬಳಗದಲ್ಲಿ ಗುರುತಿಸಿಕೊಂಡಿರುವ ಮಹೇಶ(ಮಾಯ್ಸ)ರ ನಡುವೆ ತೀವ್ರ ವಾಗ್ವಾದವೇ ಏರ್ಪಟ್ಟಿತ್ತು. ನಮ್ಮ ವಾಗ್ವಾದದಿಂದಾಗಿ ಹಲವರು ಕನ್ನಡದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾಗಿ ತಮ್ಮ ಸಂತೋಷ ಹಂಚಿಕೊಂಡಿದ್ದರು. ಯಾವುದೇ ಒಂದು ಬರೆಹ ಅಥವಾ ಚರ್ಚೆ ಒಂದು ಹೊಸ ಆರೋಗ್ಯಕರ ವಾಗ್ವಾದವನ್ನು ಸೃಷ್ಟಿಸದಿದ್ದರೆ ಅದರಿಂದ ಅಷ್ಟಾಗಿ ಪ್ರಯೋಜನವಾಗಲಾರದು ಎನ್ನುವುದು ನನ್ನ ವೈಯುಕ್ತಿಕ ಭಾವನೆ. ಹಾಗಂತ ವಾಗ್ವಾದ ಸೃಷ್ಟಿಸುವುದಕ್ಕಾಗಿಯೇ ಯಾರೂ ಬರೆಯುವ ಗೋಜಿಗೆ ಹೋಗಬಾರದು. ಒಂದು ಅರ್ಥಪೂರ್ಣ ವಾಗ್ವಾದ, ಸಂವಾದದಿಂದ ಹೊಸ ಬೆಳಕು, ಹೊಸ ಅರಿವು ಮೂಡುವುದಾದರೆ ಅದಕ್ಕಿಂದ ದೊಡ್ಡ ಕೆಲಸ ಇನ್ನೊಂದಿಲ್ಲ. ಯಾಕೆಂದರೆ, ಯಾವುದನ್ನೇ ಆಗಲಿ, ಯಾರನ್ನೇ ಆಗಲಿ ರೂಪಿಸುವುದು ಚಿಂತನೆ ಹಾಗೂ ಆ ಚಿಂತನೆಯನ್ನು ಕಾರ್ಯ ಸಾಧ್ಯವಾಗಿಸುವುದು ಎಂಬುದು ನನ್ನ ನಂಬಿಕೆ.
ಇನ್ನು ಕನ್ನಡ ಭಾಷೆಯ ಇತಿಹಾಸ ಶೋಧನೆಯ ಇತಿಹಾಸಕ್ಕೆ ಮರಳಿದರೆ, ಮೊದಲಿಗೆ ಕನ್ನಡ ಭಾಷೆಯ ಇತಿಹಾಸವನ್ನು ಶೋಧಿಸುವ ಕೆಲಸ ಪಾಶ್ಚಾತ್ಯ ವಿದ್ವಾಂಸರಿಂದ ಆರಂಭಗೊಂಡಿತಾದರೂ, ಕನ್ನಡದ ಮಟ್ಟಿಗೆ ಹೇಳುವುದಾದರೆ, ಕನ್ನಡದ ಮೊದಲ "ರಾಷ್ಟ್ರಕವಿ" ಗೋವಿಂದ ಪೈಗಳು ನೂರು ವರುಷಗಳ ಹಿಂದೆಯೇ ಈ ಕೆಲಸ ಆರಂಭಿಸಿದ್ದರು ಎನ್ನುವುದು ನಮಗೆಲ್ಲ ಹೆಮ್ಮೆಯ ವಿಚಾರವೇ ಸರಿ. ಅಲ್ಲಿಂದ ಸಾಕಷ್ಟು ಭಾಷಾಶಾಸ್ತ್ರಜ್ಞರು, ವಿದ್ವಾಂಸರು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿರುವರಾದರೂ, ಎಲ್ಲರ ಅಭಿಪ್ರಾಯಗಳು ಒಂದು ಅಂದಾಜಿನ ಮೇಲೆ ನಿಲ್ಲುತ್ತವೆಯೇ ಹೊರತು ನಿಖರವಾಗಿ ಯಾರಿಗೂ ಹೇಳಲು ಸಾಧ್ಯವಾಗಿಲ್ಲ. ಕನ್ನಡದಲ್ಲಿ ಮೊದಲ ಶಾಸನ ಎಂದು ಮಾನ್ಯ ಮಾಡಲಾಗಿರುವ ಹಲ್ಮಿಡಿ ಶಾಸನದ ಕಾಲ ಕ್ರಿ.ಶ.450 ಎಂದು ಹೇಳಲಾಗಿದ್ದು, "ಹಲ್ಮಿಡಿ ಶಾಸನಕ್ಕೆ ಎರಡು ಮೂರು ಶತಮಾನಗಳಷ್ಟಾದರೂ ಹಿಂದೆ ಕನ್ನಡ ಗ್ರಾಂಥಿಕ ಭಾಷೆಯಾಗಿದ್ದಿರಬೇಕು ಎಂದು ಊಹಿಸಲಾಗಿದೆ. ಕ್ರಿ.ಶ.800ರ ಸೈಗೊಟ್ಟ ಶಿವಮಾರನ ಶಾಸನದ 'ಗಜಾಷ್ಟಕ' ಓವನಿಗೆ, ಒನಕೆವಾಡು ಆಗಿ ಜನಪ್ರಿಯವಾಯಿತಂತೆ. ಅಂದರೆ ಆ ಕಾಲಕ್ಕಾಗಲೇ ಜಾನಪದ ಕಾವ್ಯ ಪ್ರಕಾರಗಳು ಕನ್ನಡದಲ್ಲಿದ್ದುವೆಂದು ಹೇಳಬಹುದು. ಒಟ್ಟಿನಲ್ಲಿ, ಕನ್ನಡಭಾಷೆಯ ಅಸ್ತಿತ್ವ ಕ್ರಿ.ಪೂ.ಕ್ಕೆ ಹೋಗುತ್ತದೆ" ಎಂದು 'ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ' ರಚಿಸಿರುವ ಪ್ರೊ.ಎಂ.ಎಚ್.ಕೃಷ್ಣಯ್ಯನವರು ಅಂದಾಜಿಸಿದ್ದಾರೆ.
"ಕನ್ನಡ ಪ್ರದೇಶದ ಬಗ್ಗೆ ಮಹಾಭಾರತದ ಸಭಾಪರ್ವ ಹಾಗೂ ಭೀಷ್ಮಪರ್ವಗಳಲ್ಲಿ 'ಕರ್ಣಾಟಾಃ' ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ಈಗಿರುವ ರೂಪದಲ್ಲಿ ಮಹಾಭಾರತ ಕ್ರಿ.ಪೂ.3ನೇ ಶತಮಾನದಿಂದ ಕ್ರಿ.ಪೂ.2ನೇ ಶತಮಾನದೊಳಗೆ ಪೂರ್ಣಗೊಂಡಿರಬೇಕೆಂದು ಊಹಿಸಿದ್ದಾರೆ. ಆದರೆ ಕನ್ನಡ ಭಾಷೆ ಮೂಲದ್ರಾವಿಡದಿಂದ ಎಂದು ಕವಲೊಡೆಯಿತು, ಸ್ವತಂತ್ರ ಅಸ್ತಿತ್ವ ಪಡೆಯಿತು ಎಂಬುದು ತಿಳಿಯುವುದಿಲ್ಲ. ಭಾಷೆ ಗ್ರಂಥಸ್ಥವಾದಾಗಲೇ ದಾಖಲೆಗಳ ಆಧಾರ ದೊರೆಯುವುದು. ಆದ್ದರಿಂದ ಕನ್ನಡದ ಪ್ರಾಚೀನತೆಯನ್ನು ಶಾಸನ ಹಾಗೂ ಶಾಸನೇತರ ಆಧಾರಗಳಿಂದ ತಿಳಿಯಬೇಕಿದೆ. ಕನ್ನಡದ ಪ್ರಾಥಮಿಕ ಅವಸ್ಥಾರೂಪವಂತೂ ತಿಳಿಯುವುದಿಲ್ಲ".
ಇತ್ತೀಚೆಗೆ ಈ ನಿಟ್ಟಿನಲ್ಲಿ ಹೊಸ ಒಳನೋಟಗಳನ್ನು ನೀಡಿರುವ ಪ್ರೊ.ಷ.ಶೆಟ್ಟರ್‌ರವರ 'ಶಂಗಂ ತಮಿಳಗಂ...', ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಹಳೆಯದು ಎನ್ನಲಾಗುವ ಶಾಸ್ತ್ರೀಯ ತಮಿಳು ಹಾಗೂ ಕನ್ನಡವನ್ನು ತೌಲನಿಕವಾಗಿ ಅಧ್ಯಯನ ಮಾಡಿರುವ ಕೃತಿಯಾಗಿದೆ. ಪ್ರೊ.ಶೆಟ್ಟರ್ ಅವರು ಹೇಳುವ ಹಾಗೆ "ಈ ವೇದಗಳ ಬಗ್ಗೆ ಸಂಸ್ಕೃತ ಸಾಹಿತ್ಯದ ಬಗ್ಗೆ ಸಾಕಷ್ಟು ಕೃಷಿ ಆಗಿದೆ. ಆದರೆ ನಮ್ಮ ದ್ರಾವಿಡ ಭಾಷೆ(ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ದ್ರಾವಿಡ ಭಾಷೆಗಳು)ಗೆ ಸಂಬಂಧಪಟ್ಟ ಹಾಗೆ ಆ ಮಟ್ಟದ ಅಧ್ಯಯನ ನಡೆದಿಲ್ಲ" ಹಾಗೂ "ಇತ್ತೀಚಿನ ಸಂಶೋಧನೆಗಳು ಆಸಕ್ತಿಕರವಾಗಿ ಬಂದಿರುವುದು ಸಾಹಿತ್ಯದ ವಿದ್ಯಾರ್ಥಿಗಳಿಂದಲೇ ಹೊರತು ಇತಿಹಾಸಕಾರರಿಂದ ಅಲ್ಲ" ಎನ್ನುವ ಮಾತು ವಿದ್ಯಾರ್ಥಿಗಳು ಇತಿಹಾಸಕಾರರಿಗಿಂತ ಹೆಚ್ಚು ಆಸಕ್ತಿಕರ ಸಂಶೋಧನೆಯನ್ನು ಮಾಡಬಲ್ಲರು ಎಂಬ ಮಾತನ್ನು ಪುಷ್ಟೀಕರಿಸುತ್ತದೆ. ಹಾಗಾಗಿ, ನಮ್ಮಲ್ಲಿ ಯಾರಿಂದಾದರೂ ಅಂತಹ ಕೆಲಸ ಮಾಡಲು ಸಾಧ್ಯವಾದಲ್ಲಿ, ಅಥವಾ ಅಂತಹ ಕೆಲಸಕ್ಕೆ ಉತ್ತೇಜನ ಸಿಗುವುದಾದಲ್ಲಿ ಅದು ಕನ್ನಡದ ಮಟ್ಟಿಗೆ ದೊಡ್ಡ ಸಾಧನೆಯೇ ಹೌದು ಎನ್ನುವುದು ನನ್ನ ಅಭಿಪ್ರಾಯ.
ಇನ್ನು ಈ ಚರ್ಚೆಯ ವಿಷಯಕ್ಕೆ ಬರುವುದಾದರೆ, ಈಗ ನಾನು ಹುಟ್ಟುಹಾಕುತ್ತಿರುವ ಈ ಚರ್ಚೆ ಸುಮಾರು 30-35 ವಾರಗಳ ನನ್ನ ಹಾಗೂ ಸಂಪದದ ಸಂಬಂಧದಲ್ಲಿ ನನ್ನ ಮೊದಲನೆಯ ಚರ್ಚೆಯಾಗಿದೆ. ಅನಗತ್ಯವೆನಿಸುವ, ಗಂಭೀರವಲ್ಲದ ಚರ್ಚೆಗಳಲ್ಲಿ ಪಾಲ್ಗೊಳ್ಳುವುದನ್ನು ವೈಯುಕ್ತಿಕವಾಗಿ ಅಷ್ಟಾಗಿ ಇಷ್ಟಪಡದ ನಾನು, ಸಂಪದದಲ್ಲಿನ ನನ್ನ ಮೊದಲ ಚರ್ಚೆಯ ವಿಷಯವಾಗಿ ನನಗೆ ಹಾಗೂ ಹೆಚ್ಚಿನ ಸಂಪದಗರಿಗೆ ಇಷ್ಟವಾಗುವಂತಹ ಗಂಭೀರವಾದ, ಮೌಲಿಕವಾದ ವಿಷಯವನ್ನು ಆಯ್ದುಕೊಂಡಿದ್ದೇನೆ. ಇದಕ್ಕೆ ಕಾರಣ, ಈ ಹಿಂದೆ ನಾನು ನನ್ನ ಲೇಖನದಲ್ಲಿ "ಸುಮಾರು 2,000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ" ಎಂದು ಹೇಳಿದ್ದಕ್ಕೆ ಮಹೇಶರವರು ಆಕ್ಷೇಪ ವ್ಯಕ್ತಪಡಿಸಿ ಇದು "ತಪ್ಪು" ಎಂದು ಹೇಳಿದ್ದರು. ಆಗ ನಾನು ಅವರ ಅಭಿಪ್ರಾಯವನ್ನು ಕೋರಿದ್ದೆ. ಯಾವುದನ್ನಾದರೂ ನಾವು ತಪ್ಪು ಎಂದು ಹೇಳುವಾಗ ಸರಿಯಾದದ್ದು ಯಾವುದು ಎಂದು ನಮಗೆ ತಿಳಿದಿರಬೇಕು ಎನ್ನುವುದು ನನ್ನ ಭಾವನೆ. ಆದರೆ, ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯವನ್ನು ತಿಳಿಸುವ ಹಕ್ಕು ಇರುತ್ತದಾದ್ದರಿಂದ ಮಹೇಶರ ಅಭಿಪ್ರಾಯವನ್ನು ನಾನು ಸ್ವೀಕರಿಸಿ, ಕನ್ನಡ ಭಾಷೆಯ ಇತಿಹಾಸದ ಕುರಿತು ಸಾಕಷ್ಟು ಆಳಕ್ಕೆ ಹೋಗಿ ಮಾತನಾಡಬೇಕಾದ ಅಗತ್ಯವಿದೆ. ಅದರಿಂದಾಗಿ ಆ ಕುರಿತು ನಾನು ಮತ್ತಷ್ಟು ತಿಳಿದುಕೊಂಡ ನಂತರ ಚರ್ಚೆಗೆ ಇಳಿಯುವುದಾಗಿ ತಿಳಿಸಿದ್ದೆ. ಆ ಮಾತಿಗೆ ಕಟ್ಟುಬಿದ್ದೇನೂ ಈ ಚರ್ಚೆಯನ್ನು ಆರಂಭಿಸಿಲ್ಲ ಎಂದೂ ಇಲ್ಲಿ ಸ್ಪಷ್ಟಪಡಿಸುತ್ತ ಯಾರದೇ, ಯಾವುದೇ ಜ್ಞಾನವೂ ಅಂತಿಮವಲ್ಲವಾದ್ದರಿಂದ ಕನ್ನಡ ಭಾಷೆ ಎಷ್ಟು ಹಳೆಯದು ಎಂಬುದರ ಕುರಿತಾಗಿ ನನ್ನ ಓದು, ಅರಿವು, ಗ್ರಹಿಕೆಗೆ ಮೀರಿದಂತಹ ಚಿತ್ರಣವನ್ನು ನನ್ನ ಸಂಪದಿಗ ಮಿತ್ರರು ನೀಡುವುದಾದಲ್ಲಿ ನಾನು ಅವರಿಗೆ ಕೃತಜ್ಞನಾಗಿರುತ್ತೇನೆ. ಇದು ಕೇವಲ ಕನ್ನಡ ನಾಡು, ನುಡಿ, ಸಂಸ್ಕೃತಿಯ ಮಟ್ಟಿಗೆ ಮಾತ್ರವಲ್ಲ, ನಮ್ಮ ಈ ಚರ್ಚೆಗೆ ವೇದಿಕೆಯಾಗಿರುವ ಸಂಪದದ ಉದ್ದೇಶವನ್ನು ಕೂಡ ಸಾರ್ಥಕಗೊಳಿಸುತ್ತದೆ ಎಂದು ನಾನು ನಂಬಿದ್ದೇನೆ.
ಇಲ್ಲಿಯಾರೂ ಮುಖ್ಯರಲ್ಲಯಾರೂ ಅಮುಖ್ಯರಲ್ಲ;ಯಾವುದೂ ಯಃಕಶ್ಚಿತವಲ್ಲ!ಇಲ್ಲಿಯಾವುದಕ್ಕೂ ಮೊದಲಿಲ್ಲ;ಯಾವುದಕ್ಕೂ ತುದಿಯಿಲ್ಲ;ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;ಕೊನೆಮುಟ್ಟುವುದೂ ಇಲ್ಲ!ಇಲ್ಲಿಅವಸರವೂ ಸಾವಧಾನದ ಬೆನ್ನೇರಿದೆ!ಇಲ್ಲಿಎಲ್ಲಕ್ಕೂ ಇದೆ ಅರ್ಥ;ಯಾವುದೂ ಅಲ್ಲ ವ್ಯರ್ಥ;ನೀರೆಲ್ಲವೂ ಊ ತೀರ್ಥ!(ಕುವೆಂಪುರವರ "ಮಲೆಗಳಲ್ಲಿ ಮದುಮಗಳು")
ಈ ಲೇಖನ ವನು ಬ್ರಾಂಡ್ ಕನ್ನಡ ಬ್ಲಾಗ್ ದಿಂದ ಆರಿಸಲಾಗಿದೆ
ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯಾವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆಮುಟ್ಟುವುದೂ ಇಲ್ಲ!
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ;
ನೀರೆಲ್ಲವೂ ಊ ತೀರ್ಥ!
(ಕುವೆಂಪುರವರ "ಮಲೆಗಳಲ್ಲಿ ಮದುಮಗಳು")
ಈ ಲೇಖನ ವನು ಬ್ರಾಂಡ್ ಕನ್ನಡ ಬ್ಲಾಗ್ ದಿಂದ ಆರಿಸಲಾಗಿದೆ